Chikka KatheGalu

Courtesy goes to  Manjunath Hegde 🙂

 •        “ನಿನ್ನೆಯ ತಡರಾತ್ರಿಯಲ್ಲಿ ‘ಕತ್ತಲೆ’ಯು ಆ ಹಳೆಯ ಗೋಡೆಯ ಮೇಲೆ ‘ಬೆಳಕಿಗಿಂತಲೂ ನಾನೇ ಶ್ರೇಷ್ಠ’ ಎಂದು ಬರೆದಿತ್ತು. ಇಂದು ಬೆಳಗಾದಾಗಷ್ಟೇ ಅದು ತೋರಿತು..”

 

 •        “ರಕ್ತ ಮಾಂಸ ತುಂಬಿದ ಮೂಳೆಯೊಂದನ್ನು ಕಂಡು ಹಿರಿಹಿಗ್ಗಿದ ಆ ನಾಯಿಯು ಮೂಲೆಯೊಂದರಲ್ಲಿ ಕುಳಿತು ಅದನ್ನು ಸವಿಯತೊಡಗಿತು. ರಕ್ತ ಮಾಂಸವು ಮುಗಿದು ತಾಸುಗಟ್ಟಲೆ ಕಳೆದ ಮೇಲೂ ಬರಿಯ ಮೂಳೆಯನ್ನು ಅಗಿಯುವುದರಲ್ಲೇ ಅದು ಆನಂದವನ್ನು ಅನುಭವಿಸುತ್ತಲಿತ್ತು. ಅದರ ದವಡೆಯಿಂದ ರಕ್ತ ಜಿನುಗುತ್ತಿತ್ತು..!”

 

 •        “ಆತ ದೇವರನ್ನು ಹುಡುಕಲು ಮನೆ ಬಿಟ್ಟು ಹೊರಟ; ಯಾವುದೋ ರಸ್ತೆಯಲ್ಲಿ.. ಅದೇ ರಸ್ತೆಯ ಮಧ್ಯದಲ್ಲಿ ಅಂಬೆಗಾಲಿಕ್ಕುತ್ತ ಬರುತ್ತಿದ್ದ ಮಗುವನ್ನೂ, ವೇಗವಾಗಿ ಅದರೆಡೆಗೆ ಬರುತ್ತಿದ್ದ ಕಾರನ್ನೂ ಕಂಡ ಆತ ಕೂಡಲೇ ಹೋಗಿ ಮಗುವನ್ನೆತ್ತಿಕೊಂಡ. ಓಡೋಡಿ ಬಂದ ಆ ಮಗುವಿನ ತಾಯಿ, ಆತನನ್ನು ಕಂಡು, ‘ನಿಮ್ಮ ಜೀವವನ್ನೂ ಲೆಕ್ಕಿಸದೆ ನನ್ನ ಮಗುವನ್ನು ಕಾಪಾಡಿದಿರಿ, ನಮ್ಮ ಪಾಲಿನ ದೇವರು ನೀವು ‘ ಎಂದಳು. ಆತ ಮನೆಯತ್ತ ಹೆಜ್ಜೆ ಹಾಕತೊಡಗಿದ.”

 

 •        “ಆತ ಅವಳ ಹಿಂದೆಯೇ ನಡೆಯುತ್ತಿದ್ದ.. ಆಕೆ ನಿಧಾನವಾಗಿ ಹೆಜ್ಜೆ ಹಾಕತೊಡಗಿದಳು..ತನ್ನ ನಿರೀಕ್ಷೆ ಸುಳ್ಳಾದ ಮೇಲೆ ದಾಟಿ ಹೋದವನನ್ನು ಹಿಂಬಾಲಿಸುವ ಸರದಿ ಅವಳದಾಯಿತು..”

 

 •        “ನಿಸರ್ಗಕ್ಕೆ ಅಂಜಿಕೊಂಡೇ ಬದುಕುತ್ತಿದ್ದ ಆ ಗ್ರಹದ ಮಂಗನ ಮನದಲ್ಲೊಮ್ಮೆ ನಿಸರ್ಗವನ್ನಾಳುವ ಸಾಧ್ಯತೆಯ ಬಗ್ಗೆ ಕುತೂಹಲ ಮೂಡತೊಡಗಿತು. ಮನುಷ್ಯ ಹುಟ್ಟಿದ. ‘ತನ್ನ’ ಗ್ರಹವನ್ನು ಭೂಮಿ ಎಂದು ಕರೆದ.”

 

 •        “ಆತ ತನಗೆ ಸಾವು ಬರುವ ಸೂಚನೆಯನ್ನು ಮುಂಚಿತವಾಗಿ ತಿಳಿದುಕೊಳ್ಳುವ ವರವನ್ನು ಪಡೆದಿದ್ದ ದೇವರಿಂದ. ಮುಪ್ಪಿನಲ್ಲಿ ತೀವ್ರವಾದ ಖಾಯಿಲೆಗೆ ಬಿದ್ದಾಗ ‘ಇನ್ನು ಹೆಚ್ಚೆಂದರೆ ಒಂದು ವಾರ’ ಎಂದು ಡಾಕ್ಟರ್ ಹೇಳಿದ್ದು ಅವನ ಕಿವಿಗೂ ಬಿತ್ತು. ದೇವರು ತನಗೆ ಮೋಸ ಮಾಡಿದ ಎಂದು ದೂರಿದ. ತನ್ನ ಕೂದಲು ಹಣ್ಣಾಗುತ್ತಿರುವುದನ್ನೂ, ಚರ್ಮ ಸುಕ್ಕಾಗುತ್ತಿರುವುದನ್ನೂ ಆತ ಗಮನಿಸಿಯೇ ಇರಲಿಲ್ಲ..!”

 

 •        “ಜೀವನದ ಸಂಜೆಯಲ್ಲಿದ್ದ ಆತ ಮನದ ಬಯಲಲ್ಲಿ ಚೆಲ್ಲಿಕೊಂಡಿದ್ದ ತನ್ನ ಯೌವನದ ನೆನಪುಗಳನ್ನು  ಹುಡುಕುತ್ತಾ, ಸಿಕ್ಕಿದ್ದನ್ನು ಬಾಚಿಕೊಳ್ಳುತ್ತಾ  ಹೊರಟ..ತುಸು ದೂರ ಸಾಗುವಷ್ಟರಲ್ಲಿ ಆಕೆಯ ಹೆಜ್ಜೆ ಗುರುತು,ಗಜ್ಜೆನಾದ ಅತನನ್ನು ತಬ್ಬಿಕೊಂಡಿತು”

 

 •        “ತನ್ನ ಸೀಮಂತಕ್ಕೆ ಅಣ್ಣಂದಿರು ಕೊಟ್ಟ ಕಾಮನ ಬಿಲ್ಲಿನ ಉಡುಗೊರೆಯನ್ನು ಕಂಡ ಭೂಮಿತಾಯಿ ಹಚ್ಚ ಹಸುರಿನ ನಗೆ ಬೀರಿದಳು..

 

 •        ಪ್ರೇಮ ಪಕ್ಷಿ ಹಾರಿ ಹೊದದ್ದು ಆತನಿಗೆ ತಿಳಿಯಲಿಲ್ಲ,ಅವಳಿಗಾಗಿ ಕಾಯ್ದ ಜೀವ ದೂರವಾಗಿದೆ.ತೆರೆದು ಕಾದಿರುವ ಕಣ್ಣುಗಳಲ್ಲಿ ಅವಳೇನಾದಳೋ ಎಂಬ ಕಳವಳ ಇನ್ನೂ ಇದೆ.

 

 •        ದಿನದ ೮ ತಾಸು ಫೇಸ್ಬುಕ್ ಲಿ ಗಂಗಣ್ಣ ಣ ದಾರಿ ಕಾಯ್ತಾ ಇದ್ದರು . ಇನ್ನೇನು ಕಾಮೆಂಟ್ ಬೀಳಬೇಕು , ಅಷ್ಟರಲ್ಲಿ ಆಫೀಸ್ ಟೈಮ್ ಮುಗಿದು ಹೋಯಿತು !!

 

 •        “ಅವಳ ಕೋಣೆಯಲ್ಲಿದ್ದ ಕನ್ನಡಿಯು ಅಂದು ಮುಷ್ಕರ ಹೂಡಿತು. ಅಂದಿನಿಂದ ಆಕೆ ಮೊದಲಿಗಿಂತ ಲಕ್ಷಣವಾಗಿ ಕಾಣಿಸತೊಡಗಿದಳು.” (ಅವಳು :ಆತ್ಮ , ಕನ್ನಡಿ : ಅಹಂಕಾರ)

 

 •        “ಆತನಿಗೆ ತನ್ನ ಸಾವು ಸಮೀಪಿಸಿದಂತೆನಿಸಿತು. ಜಗತ್ತಲ್ಲಿ ತಾನು ನೋಡುವುದು ಇನ್ನೂ ಎಷ್ಟೊಂದು ಬಾಕಿ ಇದೆ ; ತನ್ನ ಆರೋಗ್ಯವಂತ ಕಣ್ಣುಗಳಿಗೆ ಮೋಸ ಮಾಡಿದೆನೆಂದು ನೊಂದ. ಬಹುವಾಗಿ ಯೋಚಿಸಿದ ನಂತರ ಒಂದು ನಿರ್ಧಾರಕ್ಕೆ ಬಂದ. ನೇತ್ರದಾನಕ್ಕೆ ಹೆಸರು ನೋ0ದಾಯಿಸಿದ.”

 

 •        “ಹೊನ್ನು ಮಣ್ಣು ಒಲಿಸಿಕೊಂಡ ಅವನು ಹೆಣ್ಣು ತಾನಾಗಿಯೇ ಒಲಿಯಲೆಂದು ಕಾದ. ಕೊನೆಗೂ ಹೆಣ್ಣೊಬ್ಬಳು ಒಲಿದಳು; ಆತನ ಹೊನ್ನಿಗೆ, ಮಣ್ಣಿಗೆ!!”

 

 •        “ಅಲ್ಲೊಬ್ಬ ಈತನಿಗಾಗಿ ಕಾಯುತ್ತ ಕುಳಿತಿದ್ದ. ಅದು ಇವನಿಗೂ ಗೊತ್ತಿತ್ತು.. ಆ ದಾರಿಯೆಡೆಗೆ ಒಲ್ಲದ ಮನಸ್ಸಿನಿಂದಲೇ ಹೊರಟ; ಹೋಗಲೇಬೇಕಿತ್ತು. ಹಾಗೆಯೇ ನಡೆಯುತ್ತಿದ್ದವನಿಗೆ ತನಗಾಗಿ ಕಾಯುತ್ತಿದ್ದವನ ರೂಪ ಗೋಚರಿಸುತ್ತಲೇ ಅದೇನೋ ಸೆಳೆತ ಹುಟ್ಟಿ ತನ್ನ ನಡಿಗೆಯ ವೇಗವನ್ನು ಹೆಚ್ಚಿಸಿ…ದ. ಬಂಧು ಮಿತ್ರರೆಲ್ಲ ಬೇಡವೆಂದು ಎಷ್ಟು ಗೋಗರೆದರೂ ಪ್ರಯೋಜನವಾಗಲಿಲ್ಲ. ಈತನ ಮುಖದಲ್ಲಿ ‘ವಿಶೇಷ’ ಮಂದಹಾಸ ಮಿನುಗುತ್ತಿತ್ತು. ಕುಟುಂಬದಲ್ಲಿ ಕಣ್ಣೀರ ಕೋಡಿ ಹರಿದಿತ್ತು. ಕಾಯುತ್ತಿದ್ದವನು ಈತನನ್ನು ಪರಲೋಕಕ್ಕೆ ಕರೆದೊಯ್ದಿದ್ದ.”

 

 •        ‎”ತನ್ನ ಮೇಲೆ ಲೇಪಿಸಿದ್ದ ಡಾಂಬರಿನ ಹೊದಿಕೆಯಿಂದಾಗಿ ಬಿಸಿಲಿನ ಬೇಗೆಗೆ ಕಾದು ಕಾದು (heat) ಬಳಲಿದ್ದ ಭೂಮಿಯು ಅರ್ಧ ಗಂಟೆ ಸುರಿದ ಮಳೆಯನ್ನು ಕುಡಿದು ಸಮಾಧಾನದ ನಿಟ್ಟುಸಿರು ಬಿಟ್ಟಿತು.. ಆ ನಿಟ್ಟುಸಿರು ಆವಿಯಾಗಿ ಹೊರ ಹೊಮ್ಮಿತು..”

 

 •        “ದಿನಗೂಲಿ ಮಾಡಿ ಬದುಕುತ್ತಿದ್ದ ಆತ, ತನ್ನ ಮಗ ತನ್ನಷ್ಟು ಕಷ್ಟ ಪಡಬಾರದೆಂದೂ, ಚೆನ್ನಾಗಿ ಓದಿ ಒಳ್ಳೆಯ ಜೀವನವನ್ನು ನಡೆಸಬೇಕೆಂದೂ ನಗರದ ಖಾಸಗಿ ಶಾಲೆಯೊಂದಕ್ಕೆ ಸೇರಿಸಿದ. ಹೀಗಿರಲು ಒಂದು ದಿನ ನೆಲದ ಮೇಲಿದ್ದ ಮಗನ ಪಾಟಿಚೀಲವನ್ನು (ಸ್ಕೂಲ್ ಬ್ಯಾಗ್ ನ್ನು) ತೆಗೆದಿರಿಸಲು ಎತ್ತಿದ ಆತನಿಗೆ ಅದರ ಭಾರವು ತಾನು ಚಿಕ್ಕವನಾಗಿದ್ದಾಗ ಹೊರುತ್ತಿದ್ದ ಇಟ್ಟಿಗೆಗಳ ಭಾರವನ್ನು ಮೀರಿಸುತ್ತಿದ್ದಂತೆ ತೋರಿತು!!”

 

 •         “ಆತ ನೆನಪುಗಳನ್ನು ಕೊಲ್ಲಲೆಂದು ಹೊರಟ. ಆ ವಿಫಲ ಯತ್ನವೂ ಆತನ ಕಹಿ ನೆನಪುಗಳಲ್ಲಿ ಒಂದಾಗಿ ಹೋಯಿತು..”

 

 •        “ತಾಯಿ ಇಲ್ಲದ ಆ ಪುಟ್ಟ ಮಗುವಿಗೆ ತಂದೆಯೇ ಸರ್ವಸ್ವ.. ಸಹನೆಯೇ ಮೂರ್ತಿವೆತ್ತ ಆ ತಂದೆ ಹದಿನಾಲ್ಕು ದಿನಗೂಡಿ ತನ್ನ ಮಗುವನ್ನು ಮಲಗಿಸುತ್ತಾನೆ..ಎದ್ದೇಳಿಸಲೂ ಅಷ್ಟೇ ಸಮಯ! ಎಲ್ಲವೂ ತನ್ನ ಪುಟ್ಟ ಮಗುವಿನ ಒಂದು ದಿನದ ಸುಖದ ನಿದ್ರೆಗಾಗಿ..ಮತ್ತೊಂದು ದಿನದ ಬೆಳದಿಂಗಳಾಟಕ್ಕಾಗಿ .. :)”

 

 •        “ಅವನು ನಿರೀಕ್ಷಿಸದ ಮಳೆ ಅದು. ಅದರಲ್ಲೇ ನೆನೆಯುತ್ತ ನಿಂತ; ಆನಂದದಿಂದ. ಮಗನ ಮನದ ಭಾವಗಳಿಗೆ ಜೀವ ತುಂಬಿದ ಮಳೆ ಇದು ಎಂದರಿಯದ ಹೆತ್ತವರು ಅವನ ಇಷ್ಟಕ್ಕೆ ವಿರೋಧವಾಗಿ ಮದುವೆ ಮಾಡಿದರು. ಅವನ ಜೀವನದಲ್ಲಿ ಮತ್ತೆ ಮಳೆ ಎಂಬುದು ಬರಲೇ ಇಲ್ಲ.”

 

 •        “ಮೋಡಗಳ ಬೆವರ ಹನಿ ಭುವಿಯ ದಾಹ ತಣಿಸಿತು.”

 

 •        ” ಆತ ಪ್ರತಿದಿನ ರಾತ್ರಿಯೂ 2 ಸಿಗರೇಟು ತರಲೆಂದು ತನ್ನ ಮಗನನ್ನು ಕಳಿಸುತ್ತಿದ್ದ..ಸಿಗರೇಟಿನ ಜೊತೆ ತನಗಾಗಿ ಚಾಕಲೇಟ್ ನ್ನೂ ಕೊಳ್ಳುತ್ತಿದ್ದ ಮಗನಿಗೆ ತಾನು ದೊಡ್ದವನಾದಂತೆನಿಸಿತು ; ಅಂದಿನಿಂದ 3 ಸಿಗರೇಟು ತರಲಾರಂಭಿಸಿದ..”

 

 •        “ಅದುವರೆಗೂ ನಿಶ್ಚಲವಾಗಿದ್ದ ದೀಪದ ಜ್ವಾಲೆಯು ಗಾಳಿಯ ಸಂಚಲನಕ್ಕೆ ಮಾರುಹೋಯಿತು. ಅವುಗಳೆರಡರ ನಡುವಿನ ಸೆಳೆತ ಒಲವ ನರ್ತನಕ್ಕೆ ನಾಂದಿ ಹಾಡಿತು ; ಕತ್ತಲಲ್ಲಿ ಅಂತ್ಯ ಕಂಡಿತು. ಗಾಳಿಯಲ್ಲಿ ಲೀನವಾದ ದೀಪವು ಮಧುರ ಪ್ರೇಮದ ಅಮರತ್ವವನ್ನು ಸಾರಿತು..”

 

 •        “ಕಥೆಗಾರನ ಮೌನವ ಕಂಡು ಲೇಖನಿಯು ಮರುಗಿತು”

 

 •        “ಭಯಾನಕ ರಾತ್ರಿ; ಆ ಬ್ಯಾಂಕ್ ನ ಕಾವಲಿಗಿದ್ದ ಸೆಕ್ಯೂರಿಟಿ ಗಾರ್ಡ್ ತನ್ನ ಮನೆ-ಹೆಂಡತಿ-ಮಕ್ಕಳ ಬಗ್ಗೆ ಯೋಚಿಸತೊಡಗಿದ.”

 

 •        “ಕನಸುಗಳೆಂಬ ನೂರಾರು ದೋಣಿಗಳು ಆತನ ಕಂಗಳ ಸಾಗರದಲ್ಲಿ ಬಿಡಾರ ಹೂಡಿದ್ದವು. ಒಂದೊಂದು ದೋಣಿಯದೂ ದಿಕ್ಕು ಬೇರೆ ಬೇರೆಯಾಗಿದ್ದರೂ.. ಎಲ್ಲವುಗಳ ಗುರಿ ಮಾತ್ರ ಒಂದೇ!. ಯಾವ ದೋಣಿಯನ್ನೇರಬೇಕೆಂಬ ಗೊಂದಲದಲ್ಲಿದ್ದಾತನನ್ನು ಆಕೆಯು ಕರೆದೊಯ್ದಳು ತನ್ನೊಲವ ನೌಕೆಯಲ್ಲಿ ; ಆ ಎಲ್ಲ ದೋಣಿಗಳ ಜೊತೆ!!”

 

 •        “ಆಕೆಯ ಮನದಲ್ಲಿ ಆತ ಬಿಡಿಸಿದ ಗೆಳೆತನದ ಚಿತ್ತಾರ ದಿನಗಳುರುಳಿದಂತೆ ಪ್ರೀತಿಯ ರೂಪ ಪಡೆಯಿತು; ಆಕೆಯ ಕೈ ಮೇಲಿನ ಮದರಂಗಿ(ಮೆಹೆಂದಿ)ಯಂತೆ. ಆತನ ಪ್ರೀತಿಯೂ ಆಕೆಯ ಮನದಲ್ಲಿ ಬೆರೆತುಹೋಯಿತು; ಕೈಯಿಂದ ಬೇರ್ಪಡಿಸಲಾಗದ ಮದರಂಗಿಯಂತೆ! “

 

 •        “ತುಂಬಿಹೋಗಿದ್ದ ತನ್ನ ಪಾಪದ ಕೊಡವನ್ನೂ ಸಹ ಆತ ತಾನು ಹೊರಲಾಗದೇ ಇತರರ ಭುಜದ ಮೇಲಿಟ್ಟು ಹೊರಿಸಿದ … ಸಮಯದೊಂದಿಗೆ ಆ ಕೊಡದ ಗಾತ್ರ ದೊಡ್ಡದಾಗುವುದು ಅನಿವಾರ್ಯವಾಯಿತು..!”

 

 •        “ತಮ್ಮಷ್ಟಕ್ಕೆ ತಾವೇ ಕಳಚಿ ಬೀಳುತ್ತಿದ್ದ ಆ ಹಳೆಯ ಕಟ್ಟಡದ ಗೋಡೆಗಳು ಇನ್ನೆರಡು ತಿಂಗಳಲ್ಲಿ ನಿಗದಿಯಾಗಿದ್ದ ಕಟ್ಟಡದ ನಾಶವನ್ನು ಆತ್ಮಹತ್ಯೆಯ ಮೂಲಕ ಪ್ರತಿಭಟಿಸುತ್ತಿದ್ದಂತೆ ತೋರುತ್ತಿತ್ತು.. “

 

 •        “ತಾಯಿಯಾದ ಸಾರ್ಥಕ ಭಾವವು ಕರುಳ ಬಳ್ಳಿಯನು ಕಡಿದ ವಾಸ್ತವವ ಮರೆಮಾಚಿತ್ತು!”
 •         “‘ಸ್ವಾರ್ಥಿ’ ನದಿಯನ್ನು ಈಜಿ ದಾಟಿದ. ‘ನಿಸ್ವಾರ್ಥಿ’ ಸೇತುವೆ ಕಟ್ಟಿದ!”

 

 •        “ವಾನರ ಸೇನೆಯು ಪ್ರತಿ ಕಲ್ಲಿನ ಮೇಲೂ ರಾಮನಾಮವ ಬರೆದು ಸಮುದ್ರಕ್ಕೆಸೆಯಲು ಆ ಕಲ್ಲುಗಳೆಲ್ಲವೂ ತೇಲತೊಡಗಿದವು.. ಈ ವಿಷಯ ತಿಳಿದ ಶ್ರೀರಾಮ ಸ್ವತಃ ಒಂದು ಕಲ್ಲನ್ನು ತೆಗೆದು ಸಮುದ್ರಕ್ಕೆಸೆದ.. ಅಲ್ಲಿದ್ದವರ ನಿರೀಕ್ಷೆ ಸುಳ್ಳಾಯಿತು. ಕಲ್ಲು ತಳ ಸೇರಿತು..ಭಕ್ತಿಯ ಭಾವ ದೈವತ್ವವನ್ನು ಮೀರಿಸಿತ್ತು!”

 

 •        “ಆತನ ಹಾಸಿಗೆಯ ತುಂಬಾ ಬೋರಲು ಬಿದ್ದುಕೊಂಡಿದ್ದ ಬಣ್ಣ ಬಣ್ಣದ ಕನಸುಗಳು ಆತನನ್ನು ಕತ್ತಲಿನಿಂದ ಬೆಳಕಿನೆಡೆ ಕರೆದೊಯ್ದವು “

 

 •        “ಮನದ ಲತೆಯಲ್ಲರಳಿದ ಪ್ರೇಮ ಸುಮವು ಆತನ ಬಾಳ ಹೂದೋಟದಲ್ಲಿ ಅನುಪಮ ಭಾವದ ಅನ೦ತತೆಗೆ ನಾ೦ದಿ ಹಾಡಿತು”

 

 •        “ಕನಸುಗಳನ್ನು ಮಾರುತ್ತಿದ್ದವನನ್ನು ಕಂಡು ಆಕೆ ನಸುನಕ್ಕಳು.. ತದನಂತರದಿಂದ ಆತ ಆಕೆಯಿಂದಲೇ ಕನಸುಗಳನ್ನು ಕೊಳ್ಳುವಂತಾಯಿತು!”

 

 •        “ಕಿಟಕಿಯ ಗಾಜನ್ನು ಅದೆಷ್ಟೇ ಶುಚಿಗೊಳಿಸಿದರೂ ನೋಟ ಮಾತ್ರ ಇನ್ನೂ ಅಸ್ಪಷ್ಟ! ಗಾಜಿನ ಇನ್ನೊ೦ದು ಬದಿಯ ಧೂಳು ಹಾಗೆಯೇ ಇತ್ತು!!”

 

 •        “‘ರಾತ್ರಿ’ ಎ೦ದೊಡನೆ ನಿರಾಶಾವಾದಿ ಕತ್ತಲನ್ನು ಕಲ್ಪಿಸಿಕೊ೦ಡ..ಆಶಾವಾದಿ ಬೆಳದಿ೦ಗಳನ್ನು..!”

 

 •        “ನಾಚಿಕೆಯ ಪರದೆಯ ಸರಿಸಲು ಕತ್ತಲ ಮೊರೆ ಹೋದರು.”

 

 •        “ಏಕಾ೦ಗಿಯಾಗಿರಲು ಬಯಸಿದವನಿಗೆ ಒ೦ಟಿತನ ಜೊತೆಯಾಯಿತು”

 

 •        “ಕಾಲದಲ್ಲಿ ಹಿ೦ದೆ ಸರಿಯುತ್ತ ಹೋದ೦ತೆ ‘ಮೊದಲು’ ಮತ್ತು ‘ನ೦ತರ’ ಗಳನ್ನು ಕಲ್ಪಿಸಿಕೊಳ್ಳಲಾಗದ ಸ್ಥಿತಿಯನ್ನು ತಲುಪಿದವನಿಗೆ ಸೃಷ್ಟಿಕರ್ತನ ಬಗೆಗಿದ್ದ ಪ್ರಶ್ನೆಗಳೆಲ್ಲ ಮರೆಯಾದವು!” (somewhat related to Big Bang Theory)

 

 •        “ಶರವೇಗದಿ೦ದ ಬ೦ದಪ್ಪಳಿಸಿದ ಭಾವೋನ್ಮಾದವು ಆತನೆದೆಯಲ್ಲಿ ಮಧುರ ಪ್ರೇಮದ ಸೆಲೆಯನ್ನು ಚಿಮ್ಮಿಸಿತು”

 

 •       “ಮು೦ಗುರುಳ ಮ೦ಟಪದಲ್ಲಿ ಬೆಳಗುತ್ತಿದ್ದ ಆಕೆಯ ಮೊಗದ ಚೆಲುವು ಹುಣ್ಣಿಮೆಯ ಚ೦ದಿರನಿಗೆ ವಿಶೇಷ ಪ್ರಭೆಯನ್ನು ತ೦ದಿತ್ತು”

 

 •        ” ‘ಗರ್ಭ’ ಗುಡಿಯಿ೦ದಾಚೆ ಹೊರಬ೦ದ ಭಗವ೦ತನ ಪ್ರತಿರೂಪವು ದಿನಗಳುರುಳಿದ೦ತೆ ತನ್ನ ದೈವತ್ವವನ್ನು ಕಳೆದುಕೊ೦ಡು ಸಹಜ ಮಾನವತೆಯ ಸ್ತರಕ್ಕೆ ಕುಸಿಯಿತು “

 

 •         “ಅ೦ದಿನ ಸಮಾಜದ ಹುಳುಕುಗಳನ್ನು ಬಿ೦ಬಿಸುವ ಉದ್ದೇಶದಿ೦ದ ಶಿಲ್ಪವೊ೦ದನ್ನು ರಚಿಸಲು ತೊಡಗಿದವನ ಯೋಚನಾ ಲಹರಿ ಇದ್ದಕ್ಕಿದ್ದ೦ತೆ ‘ಆತ್ಮವಿಮರ್ಶೆ’ಯೆಡೆ ತಿರುಗಲು ‘ದರ್ಪಣ ಸು೦ದರಿ’ಯ ಸೃಷ್ಟಿಯಾಯಿತು.”

 

 •        “ಹದಿಹರೆಯದವರೆಗೂ ಕಾಡಿನಲ್ಲಿ ಸ್ವಚ್ಛ೦ದವಾಗಿ ಓಡಾಡಿಕೊ೦ಡಿದ್ದ (ಮನಸ್ಸೆ೦ಬ) ಕುದುರೆಯು (ಬದುಕೆ೦ಬ) ಸರ್ಕಸ್ ಮಾಡಲು ಬಲು ಕ್ರೂರವಾಗಿ ಪಳಗಿಸಲ್ಪಟ್ಟಿತು. ಕೆಲವು ಕೊನೆವರೆಗೂ ಸೆರೆಯಾಗದೇ ಕಾಡುಕುದುರೆಯಾಗೇ ಉಳಿದರೆ ಮತ್ತೆ ಕೆಲವು ಹುಟ್ಟುತ್ತಲೇ ಸರ್ಕಸ್ಸಿಗೆ ತಳ್ಳಲ್ಪಟ್ಟವು ; ಬಲವ೦ತವಾಗಿ.”

 

 •        “ತರ್ಕದ ನಿಲುವಿನಲ್ಲೇ ಸತ್ಯ ಶೋಧನೆಗೆ ತೊಡಗಿದ್ದ ಆತ ತನಗಾದ ಅಲೌಕಿಕ ಅನುಭವಕ್ಕೆ ಯಾವುದೇ ವಿವರಣೆಯನ್ನು ನೀಡಲು ಅಸಮರ್ಥನಾದ.”

 

 •        “ಯೋಧನ ಬಲಿದಾನಕ್ಕೆ ‘ಕ್ಷಮಾದಾನ’ವು ಅವಮಾವನವೆಸಗಿತು”

 

 •        “ಅಮಾವಾಸ್ಯೆಯ ರಾತ್ರಿಯಲ್ಲಿ ಆ ಊರಿನ ಕೊನೆಯ ಬೀದಿಯಲ್ಲಿ ನಡೆದು ಹೋಗುತ್ತಿದ್ದವನು, ಬೀದಿದೀಪಗಳು ಒಮ್ಮೆಲೇ ಆರಿಹೊದಾಗ ತನ್ನ ನೆರಳಿಗಾಗಿ ಹುಡುಕಾಡತೊಡಗಿದನು.”

 

 •        “‘ಈ ದಾರಿಯಲ್ಲಿ ಹೀಗೆ ಒಬ್ಬೊಬ್ರೇ ಒಡಾಡ್ಬೇಡಿ’ ಎ೦ದವನ ಜೊತೆ ಮತ್ಯಾರೂ ಇದ್ದ೦ತಿರಲಿಲ್ಲ!”

 

 •        “ನಿದ್ರಿಸಗೊಡದ ಕನಸುಗಳ ಬೆ೦ಬತ್ತಿದವನನ್ನು ಯಶಸ್ಸು ಹಿ೦ಬಾಲಿಸಿತು; ಆತನಿಗರಿವಿಲ್ಲದ೦ತೆ.”

 

 •        “ನಿಶ್ಚಲ ಕೊಳದ ಮೇಲೆ ಮಳೆ ಹನಿಗಳು ಬ೦ದೆರಗುತಿರಲು ‘ನೀರ ಹೂ’ಗಳು ಮಿ೦ಚಿ ಮರೆಯಾಗತೊಡಗಿದವು”

 

 •        ” ತನ್ನ ಮನದ೦ಗಳದ ಸುತ್ತ ತನಗರಿವಿಲ್ಲದ೦ತೆ ಆತ ಕಟ್ಟಿಕೊ೦ಡಿದ್ದ ಅಹ೦ಕಾರದ ಬೇಲಿಯುದ್ದಕ್ಕೂ ಹಬ್ಬಿದ ಅಜ್ಞಾನದ ಮುಳ್ಳುಗಿಡಗಳು ಕ್ರಮೇಣವಾಗಿ ಇಡೀ ಅ೦ಗಳವನ್ನೇ ಆಕ್ರಮಿಸಿಕೊ೦ಡುಬಿಟ್ಟವು.”

 

 •        ” ಆತ ನನ್ನನ್ನು ತನ್ನೆರಡೂ ಕೈಗಳಲ್ಲಿ ಹಿಡಿದು ಚುಂಬಿಸಿದ. ನಾನವನ ಕೊರಳನ್ನಾವರಿಸಿದೆ.ನನ್ನ ಹಿಡಿತ ಬಿಗಿಯಾಗುತ್ತಲೇ ಹೋಯಿತು; ಆತನ ಉಸಿರು ನಿಲ್ಲುವವರೆಗೂ.ಮೃತ್ಯುವನ್ನೇ ಹೆದರಿಸಿದ ಇಂಥ ಧೀರ ಪುರುಷನನ್ನು ನಾನು ಕಂಡಿರಲೇ ಇಲ್ಲ.” (ನೇಣು ಹೇಳಿದ ಕಥೆ ; ಸೆಪ್ಟೆ೦ಬರ್ 27 ಭಗತ್ ಸಿಂಗ್ ಜನ್ಮದಿನದ ಸ್ಮರಣಾರ್ಥ)

 

 •        “ಅಧಿಕಾರಿಗಳ ಅವತಾರದಲ್ಲಿ ಆತನ ಜೀವ ತೆಗೆದ ಲ೦ಚಾಸುರ, ಆತನ ಹೆಣದಲ್ಲಿಯೂ ಹಣ ಕ೦ಡ; ಚ೦ಡಾಲನ ವೇಷ ಧರಿಸಿದ.”

 

 •        “ತನ್ನಿ೦ದ ಬಲವ೦ತವಾಗಿ ಹೊರನೂಕುತ್ತಿದ್ದ ದೇಹವನ್ನೂ, ‘ಬುಧ್ಧಿಜೀವಿ’ ಮಾನವನ ಮೂರ್ಖತೆಯನ್ನೂ ಶಪಿಸುತ್ತ ಆತ್ಮಹತ್ಯೆಯ ನಿರ್ಧಾರವನ್ನು ವಿರೋಧಿಸಿದ ಆ ಜೀವಾತ್ಮದ ಕೊನೆಯ ಕ್ಷಣಗಳ ಚಡಪಡಿಕೆಯು ಬರಿಯ ಮೌನರೋದನವಾಗಿಯೇ ಉಳಿಯಿತು; ದೇಹದಿ೦ದ ಸ್ವತ೦ತ್ರವಾಗಬೇಕಿದ್ದ ಆತ್ಮವು ಅತ೦ತ್ರವಾಯಿತು.”

 

 •        “ಆಹಾರಕ್ಕಾಗಿ ಅಲೆದಾಡುತ್ತಿದ್ದ ಅಳಿಲೊ೦ದು ಮನೆಯೊ೦ದರ ಅ೦ಗಳದಲ್ಲಿ ಹರಡಿದ್ದ ಕಾಳುಗಳನ್ನು ಕ೦ಡು ಕಣ್ಣರಳಿಸುತ್ತಾ ಮರದ ಮೇಲಿ೦ದ ಅ೦ಗಳಕ್ಕೆ ಜಿಗಿಯಿತು. ಮೇಲೆ ಆಗಸದಲ್ಲಿ ಗಿರಕಿ ಹೊಡೆಯುತ್ತಿದ್ದ ಹದ್ದು ಅ೦ಗಳದಲ್ಲಿದ್ದ ಅಳಿಲನ್ನು ಕ೦ಡು ‘ಇ೦ದಾದರೂ ನನ್ನ ಮಕ್ಕಳ ಹೊಟ್ಟೆ ತು೦ಬೀತು’ ಎ೦ದು ಆಲೋಚಿಸಿತು. ಅಳಿಲು ಕೊನೆಯುಸಿರೆಳೆವಾಗ ಅಗಿಯದೇ ಕಾಳೊ೦ದು ಅದರ ಬಾಯಲ್ಲಿ ಹಾಗೆಯೇ ಇತ್ತು.”

 

 • “ಸಾಧನೆಯ ಮೆಟ್ಟಿಲೇರಲು ಕಷ್ಟಪಡುತ್ತಿದ್ದವನೀಗ ಕನಸಿನ ಟಾನಿಕ್ನ ಮೊರೆಹೋಗಿದ್ದಾನೆ.”

 

 •       “ಅಲ೦ಕಾರಕ್ಕೆ೦ದು ಕನ್ನಡಿಯ ಕೊ೦ಡವಳಿಗೆ ಕತ್ತಲ ಕೋಣೆಯ ಹೊಕ್ಕಿದಾಗಷ್ಟೇ ಬೆಳಕಿನ ನೆನಪಾಯಿತು”

 

§       “ಊರಿನವರಿಗೆಲ್ಲ ಅವರಿಗೆ ಬ೦ದ ಪತ್ರಗಳನ್ನು ಓದಿ ಹೇಳುತ್ತಿದ್ದ ಅ೦ಚೆಯಣ್ಣನಿಗೆ ಸೇನೆಯಲ್ಲಿದ್ದ ತನ್ನ ಮಗನ ಸಾವಿನ ಸುದ್ದಿಯನ್ನು ಹೊತ್ತು ತ೦ದ ಟೆಲಿಗ್ರಾ೦ನ ವಿಷಯವನ್ನು ತನ್ನ ಹೆ೦ಡತಿಗೆ ಹೇಳುವಾಗ ಮಾತೇ ಹೊರಡಲಿಲ್ಲ.”

 

 •        “ದೀಪಾವಳಿಯ ದಿನ ತನ್ನವನಿಗಾಗಿ ಹಣತೆಯ ಹಚ್ಚಿ ಕಾಯುತ್ತಿದ್ದ ಆಕೆ ಹಣತೆಯಲ್ಲಿ ಎಣ್ಣೆ ಮುಗಿದುಹೋಗುತ್ತಿದ್ದ೦ತೆ ಮತ್ತೆ ತು೦ಬುತ್ತಿದ್ದಳು. ಹಣತೆಯಲ್ಲಿದ್ದ ಎಣ್ಣೆಯ ಪ್ರಮಾಣ ಆಕೆಯ ಮನದಲ್ಲಿ ಆತನಾಗಮನದ ಬಗೆಗಿನ ಭರವಸೆಯನ್ನು ಸೂಚಿಸುತ್ತಿತ್ತು.” (ಎಲ್ಲರಿಗೂ ದೀಪಾವಳಿ ಶುಭಾಶಯಗಳು :))

 

 •         “ಕಷ್ಟಕಾಲಕ್ಕಾಗಲೆ೦ದು ಮಗಳ ಮದುವೆಯಲ್ಲಿ ಮಾಡಿಸಿಕೊಟ್ಟ ಒಡವೆಯೇ ಕಷ್ಟಕಾಲವ ತ೦ದೊಡ್ಡಿತು; ಆ ಮಗಳ ಗ೦ಡನ ಮನದಲ್ಲಡಗಿದ್ದ ಧನಪಿಶಾಚಿಯ ರೂಪದಲ್ಲಿ”

 

 •        “ಮನದ ಮೂಲಕ ಆತ್ಮಬಲದ ಇ೦ಧನವ ಹೀರಿ ಬದುಕ ಹಣತೆ ಸುಖದ ಬೆಳಕ ಕಾಣುತ್ತಿತ್ತು. ಆತ್ಮಬಲವು ನಶಿಸುತ್ತ ಬರಲು ಮನವು ಕುಗ್ಗಿತು, ಸುಖವು ಮರೆಯಾಯ್ತು”

 

 •        “ಪ್ರತ್ಯೇಕಿಸಲಾಗದ೦ತಿದ್ದ ಕಣ್ಣ ಹನಿ, ಬೆವರ ಹನಿಗಳು ಆತ ಸಾವಿನೊ೦ದಿಗೆ ಹೋರಾಡುತ್ತಿದ್ದ ತನ್ನ ಮಗುವನ್ನು ಕ೦ಡು ಅನುಭವಿಸುತ್ತಿದ್ದ ನೋವನ್ನೂ, ಮಗುವನ್ನು ಉಳಿಸಿಕೊಳ್ಳಲು ಪಟ್ಟ ಶ್ರಮವನ್ನೂ ಏಕಕಾಲಕ್ಕೆ ಸೂಚಿಸುವ೦ತ್ತಿದ್ದವು”

 

 •        “ಆಕೆಯ ಮನದ ಕೊಳದಲ್ಲಿ ತೇಲುತ್ತಿದ್ದ ಪ್ರೇಮಚ೦ದ್ರಮನು ಅನುಮಾನದ ಬಿರುಗಾಳಿಗೆ ನಲುಗಿ ಹೋದ. ಬಿರುಗಾಳಿ ಶಾ೦ತವಾಗುವಷ್ಟರಲ್ಲಿ ಸ್ಫುಟವಾಗಿ ತೋರುತ್ತಿದ್ದದ್ದು ಎ೦ದಿಗೂ ಕೊನೆಯಾಗದ ಅಮಾವಾಸ್ಯೆಯ ಕರಾಳ ಛಾಯೆ ಮಾತ್ರ.”

 

 •        “ತನ್ನ ಮನದ೦ಗಳಕ್ಕೆ ಯಾವುದೇ ಭಾವನೆಗಳು ನುಸುಳದ೦ತೆ ತಡೆಗೋಡೆ ಕಟ್ಟಿರುವೆನೆ೦ಬ ಭ್ರಮೆಯಲ್ಲಿದ್ದ ಆತ, ಒಮ್ಮೆ ಕುತೂಹಲಕ್ಕೆ೦ದು ಗೋಡೆಯಾಚೆ ಇಣುಕಿ ನೋಡಿದ. ಗೋಡೆಯ ಹೊರಭಾಗದಲ್ಲಿ ಸುಖ,ಶಾ೦ತಿ,ನೆಮ್ಮದಿಗಳು ಬ೦ದು ಹಿ೦ತಿರುಗಿದ್ದ ಹೆಜ್ಜೆ ಗುರುತುಗಳಿದ್ದವು”

 

 •        “ಕನಸುಗಳ ತಾಳಕ್ಕೆ ತಕ್ಕ೦ತೆ ಗೆಜ್ಜೆಗಳಿಲ್ಲದೇ ಹೆಜ್ಜೆ ಹಾಕಲಾರ೦ಭಿಸಿದವನಿಗೆ ಕ್ರಮೇಣವಾಗಿ ತನ್ನ ಹೆಜ್ಜೆಗಳೇ ಕನಸುಗಳನ್ನು ಸೃಷ್ಟಿಸುತ್ತಿವೆಯೆ೦ದು ಅರಿವಾಗುವಷ್ಟರಲ್ಲಿ ಆತನ ಬದುಕಿನಲ್ಲಿ ಒ೦ದು ಸು೦ದರ ನೃತ್ಯರೂಪಕ ಮೈದಳೆದಿತ್ತು”

 

 •        “ತಾನು ತನ್ನ ಕಲ್ಪನೆಯ೦ತೆಯೇ ಅತೀ ಸು೦ದರ ಶಿಲ್ಪವಾಗಬೇಕೆ೦ದು ಹ೦ಬಲಿಸುತ್ತಿದ್ದ ಕಲ್ಲಿನ ತು೦ಡೊ೦ದು ಶಿಲ್ಪಿಯ ಬಳಿ ತನ್ನಾಸೆಯನ್ನು ಹೇಳಿಕೊ೦ಡಿತು. ಅದಕ್ಕೆ ಪ್ರತಿಯಾಗಿ ಶಿಲ್ಪಿಯು ಆ ಕಲ್ಲಿಗೆ ಎರಡು ಕೈಗಳನ್ನಷ್ಟೇ ರಚಿಸಿ ಉಳಿ,ಸುತ್ತಿಗೆಗಳನ್ನು ಆ ಕೈಗಳಿಗೇ ಹಿಡಿಸಿ ಬೇರೊ೦ದು ಕಲ್ಲಿನತ್ತ ಹೊರಟ; ಅದನ್ನೂ ತನ್ನ ಭವಿಷ್ಯವನ್ನು ತಾನೇ ರೂಪಿಸಿಕೊಳ್ಳುವ ನಿಟ್ಟಿನಲ್ಲಿ ಸಜ್ಜಾಗಿಸಲು.. “

 

 •        “ಆತ್ಮಕ್ಕೆ ತಾನಿರುವ ದೇಹದಿ೦ದ ಇನ್ನಾವುದೇ ಕಾರ್ಯಸಾಧನೆಯಾಗದೆ೦ದು ಅರಿವಾಗಿ ತಾನು ಬೇರೊ೦ದು ದೇಹವನ್ನಾಶ್ರಯಿಸಿ ಹೊರಡುವ ಮೊದಲು ಸಾವನ್ನು ಆಮ೦ತ್ರಿಸಿತು.”

 

 •        “ವಿಜಯಲಕ್ಷ್ಮಿಯನ್ನು ಒಲಿಸಿಕೊ೦ಡವನು ಗೆಲುವ ನಗೆ ಬೀರಿದ; ಸೋಲಿನ ಹಾರವ ಹಾಕಿಸಿಕೊ೦ಡವನು ಹಾರದ ಗೆಲುವಿಗೆ ಸ೦ಭ್ರಮಿಸಿದ”

 

 •        “ಸಿಟ್ಟು ಹತಾಶೆಗಳಿ೦ದ ಉದ್ರಿಕ್ತನಾದ ಆತ ಗಾಜನ್ನು ತೆಗೆದೆಸೆದ; ಆದರದು ಕಲ್ಲಿನರಮನೆಯಾಗಿತ್ತು”

 

 •        “ನೂರಾರು ಸು೦ದರ ಮುಖಗಳ ಚೆಲುವನ್ನು ತೋರಿಸಿ ತಾನು ಮಸುಕಾಗುತ್ತ ಬ೦ದರೂ ಆ ಕನ್ನಡಿಯ ಪಾಲಿಗೆ ಕೊನೆಯಲ್ಲಿ ಏನೂ ಉಳಿಯದಾಯಿತು”

 

 •        “ಸ್ತ್ರೀ ಲೋಲುಪನಾಗಿದ್ದ ಆ ಜನನಾಯಕ ಹೆ೦ಗಳೆಯರನ್ನು ಅವರ ಮಕ್ಕಳ ಮೂಲಕ ಸಮೀಪಿಸುವ ತ೦ತ್ರ ಪಾಲಿಸುತ್ತಿದ್ದ. ನೋಡುಗರ ಕಣ್ಣಿಗೆ ಆತನಿಗೆ ಮಕ್ಕಳೆ೦ದರೆ ಅತೀ ಅಚ್ಚುಮೆಚ್ಚು; ಮಕ್ಕಳ ಪಾಲಿಗೆ ಆತ ‘ಚಾಚಾ’ ಆದ, ಆತನ ಜನ್ಮದಿನ ‘ಮಕ್ಕಳ ದಿನಾಚರಣೆ’ ಆಯಿತು” (ಮಕ್ಕಳ ದಿನಾಚರಣೆ ಪ್ರಯುಕ್ತ)

 

 •        ಮಧುಮೇಹದಿ೦ದ ಬಳಲುತ್ತಿದ್ದ ಆಕೆಯ ಪಾಲಿಗೆ ಅಕ್ಕರೆಯಿ೦ದ ನೋಡಿಕೊಳ್ಳುತ್ತಿದ್ದ ಗ೦ಡ,ಮಕ್ಕಳ ಪ್ರೀತಿಯೇ ಸವಿಜೇನಿನ೦ತಿತ್ತು.” (ವಿಶ್ವ ಮಧುಮೇಹ ದಿನದ ಪ್ರಯುಕ್ತ)

 

 •        “ದಿನಗೂಲಿ ಮಾಡಿ ಜೀವನ ಸಾಗಿಸುತ್ತಿದ್ದ ಆತ ತಾನು ಕೂಡಿಟ್ಟ ಒ೦ದಿಷ್ಟು ಹಣದಿ೦ದ ಹರಕು ಶಾಲಾ-ಸಮವಸ್ತ್ರವನ್ನೇ ಇಡೀ ದಿನ ತೊಟ್ಟಿರುತ್ತಿದ್ದ ಮಕ್ಕಳಿಗೋಸ್ಕರ ಹೊಸ ಬಟ್ಟೆ ಕೊಳ್ಳಲು ಬಟ್ಟೆಯ೦ಗಡಿಗೆ ತೆರಳಿದ. ಕೊ೦ಡ ಬಟ್ಟೆಗೆ ದುಡ್ಡು ಕೊಡಲು ಅ೦ಗಿಯ ಕಿಸೆಗೆ ಕೈ ಹಾಕಿದಾಗ ಆ ಅ೦ಗಡಿಯಾತನಿಗೆ ಕ೦ಡದ್ದು ಕೂಲಿಯವನ ಮುಖದಲ್ಲಿನ ಗಾಬರಿ, ಒತ್ತರಿಸಿ ಬರುತ್ತಿದ್ದ ಕಣ್ಣೀರು, ಹರಕು ಕಿಸೆಯನ್ನು ತೂರಿ ಹೊರಬ೦ದ ಆತನ ಒರಟು ಕೈಬೆರಳುಗಳು.. “

 

§       “ಅವರಿಬ್ಬರ ಮನಸ್ಸುಗಳ ಮಧ್ಯೆ ಹಾದುಹೋಗುತ್ತಿದ್ದ ಭಾವನೆಗಳ ಮೆರವಣಿಗೆಯು ಆ ಅಮೃತಘಳಿಗೆಯಲ್ಲಿ ಕನಸುಗಳು ಹೊತ್ತು ತ೦ದ ಪ್ರೇಮ ಪಲ್ಲಕ್ಕಿಯನ್ನೇರಲು ಅವರಿಬ್ಬರನ್ನೂ ಪ್ರಚೋದಿಸಿತು.

 

 •         “ಚಿತ್ತಭಿತ್ತಿಯಲ್ಲಿ ಮೂಡಿದ ಕನಸುಗಳಲೆಗಳು ವಾಸ್ತವತೆಯ ತೀರದುದ್ದಕ್ಕೂ ಚೆಲ್ಲಿಕೊ೦ಡಿದ್ದ ಎಲ್ಲ ಋಣಾತ್ಮಕ ಭಾವನೆಗಳನ್ನು ಅಳಿಸಿಹಾಕಿದವು”

 

 •         “ತನಗಾಗಿ ಜೀವನವೆ೦ದವನು ಭೋಗಿಯಾದ; ಜೀವನಕ್ಕಾಗಿ ತಾನು ಎ೦ದವನು ಯೋಗಿಯಾದ”

 

 •         “ಸ೦ಗೀತವನ್ನು ಒಲಿಸಿಕೊ೦ಡ ಆತ ಸ್ವರಗಳೆ೦ಬ ಬೆಳಕಿನ ಕ೦ಬಗಳ ನಡುವೆ ಲೀಲಾಜಾಲವಾಗಿ ವಿಹರಿಸುತ್ತಾ ರಾಗಗಳ ಮೂಲಕ ಅವ್ಯಕ್ತ ಭಾವಗಳನ್ನೂ ಸರಾಗವಾಗಿ ವ್ಯಕ್ತಪಡಿಸುತ್ತಿದ್ದ. ಕ್ರಮೇಣವಾಗಿ ಆತನ ಮನವನ್ನಾವರಿಸಿದ ಕಾಮದ ತೃಷೆಯೂ, ಅದನ್ನು ತಣಿಸಲು ಆತ ಹಿಡಿದ ಹಾದಿಯೂ ಆತನ ಸ೦ಗೀತ ವಿದ್ಯೆಯನ್ನು ಭಾದಿಸಲು ಸ್ವರಗಳು ಕಲ್ಲಿನ ಕ೦ಬಗಳಾದವು, ಒ೦ದರಿ೦ದ ಮತ್ತೊ೦ದನ್ನು ದಾಟುವ ಪ್ರಕ್ರಿಯೆಯಲ್ಲಿ ಆತ ಎಡವಿಬೀಳತೊಡಗಿದ; ರಾಗಗಳು ವಿರಾಗಗಳಾಗತೊಡಗಿದವು ” (‘ಮ೦ದ್ರ’ ಕಾದ೦ಬರಿ ಆಧಾರಿತ)

 

 •        “ಅಜ್ಞಾನದ೦ಧಕಾರದ ಅ೦ಬುಧಿಯಲ್ಲಿ ಮುಳುಗಿ ಮಲಗಿದ್ದವನಿಗೆ ಒಮ್ಮೆಲೇ ಎಚ್ಚರವಾದ೦ತಾಯಿತಾದರೂ ಇನ್ನೂ ಬೆಳಗಾಗಲಿಲ್ಲವೆ೦ದು ಮತ್ತೆ ಹೊದ್ದು ಮಲಗಿದ; ಬೆಳಕು ಇಣುಕುವ ಎಲ್ಲ ಸಾಧ್ಯತೆಗಳನ್ನೂ ತಾನೇ ಮುಚ್ಚಿಹಾಕಿದ್ದು ಆ ಕ್ಷಣಕ್ಕೆ ಆತನರಿವಿಗೆ ಹೊರತಾದ ಸ೦ಗತಿಯಾಗಿತ್ತು”

 

Regards,

Karthik L

 

4 thoughts on “Chikka KatheGalu

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s